ಕಿಟ್ಟದಕುಪ್ಪೆ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆ – ಅನುಮಾನಾಸ್ಪದ ಪ್ರಕರಣ

ಗುಬ್ಬಿ -ಕಿಟ್ಟದಕುಪ್ಪೆ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ ಬಾಲಕ ನಾಪತ್ತೆಯಾಗಿರುವ ಘಟನೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ನಾಪತ್ತೆಯಾದ ಬಾಲಕನನ್ನು ಮಧು ಎಂದು ಗುರುತಿಸಲಾಗಿದೆ. ಮಧು 7ನೇ ತರಗತಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಇದೀಗ 8ನೇ ತರಗತಿಗೆ ಸೇರ್ಪಡೆಯಾಗಬೇಕಿದ್ದನು. ಬಾಲಕನ ತಂದೆ ಬಸವರಾಜ್ ಹಾಗೂ ತಾಯಿ ಸಿದ್ಧಗಂಗಮ್ಮ ಎಂದು ತಿಳಿದು ಬಂದಿದೆ.
ಸಂಜೆ ವೇಳೆಗೆ ಮನೆಗೆ ಮರಳದ ಹಿನ್ನೆಲೆ ಆತಂಕಗೊಂಡ ತಂದೆ-ತಾಯಿ ಕೆರೆ ಸುತ್ತಮುತ್ತ ಹುಡುಕಾಟ ನಡೆಸಿದ ವೇಳೆ, ಕೆರೆಯ ಏರಿಯಾದಲ್ಲಿ ಮಗನ ಬಟ್ಟೆಗಳು ಪತ್ತೆಯಾಗಿವೆ. ಇದರಿಂದ ಭಯಗೊಂಡ ಕುಟುಂಬಸ್ಥರು ತಕ್ಷಣವೇ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆದರೆ ಸಂಜೆ ಸಮಯವಾಗಿರುವುದರಿಂದ ಬೆಳಕು ಕೊರತೆಯಿಂದ ಕೆರೆಯೊಳಗೆ ಶೋಧ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ.
ನಾಳೆ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಇಳಿದು ಶೋಧ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ಅನುಮಾನಾಸ್ಪದವಾಗಿರುವ ಹಿನ್ನೆಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಹಿನ್ನೆಲೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಅಳಲು ಮನಕಲುಕುವಂತಿದೆ.
ವರದಿ ಗುಬ್ಬಿ ಭರತ್
