ಗುಬ್ಬಿ ಮುನಿಸಿಪಲ್ ಅಧ್ಯಕ್ಷರಾಗಿ ಆಯಿಷಾ ತಾಸೀನ್, ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧ ಆಯ್ಕೆ.

ಗುಬ್ಬಿ ಮುನಿಸಿಪಲ್ ಅಧ್ಯಕ್ಷರಾಗಿ ಆಯಿಷಾ ತಾಸೀನ್, ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧ ಆಯ್ಕೆ.

 

ಗುಬ್ಬಿ: ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯಿಷಾ ತಾಸೀನ್ ಅಧ್ಯಕ್ಷರಾಗಿ ಮತ್ತು ಶ್ವೇತಾ ಜಗದೀಶ್ ಉಪಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

 

 

 

 

 

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಆರತಿ.ಬಿ ನಡೆಸಿಕೊಟ್ಟರು.  ಮಹಿಳಾ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಮಂಗಳಮ್ಮ ಹಾಗೂ ಎಸ್ ಸಿ. ಮಹಿಳಾ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾ ರಾಜೀನಾಮೆ ಸಲ್ಲಿಸಿದ್ದ ಹಿನ್ನಲೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.

 

 

 

 

 

ಪಟ್ಟಣದ 7 ನೇ ವಾರ್ಡ್ ಸದಸ್ಯೆ ಆಯಿಷಾ ತಾಸೀನ್ ಮಹಮ್ಮದ್ ಸಾದಿಕ್ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. 18 ನೇ ವಾರ್ಡ್ ಸದಸ್ಯೆ ಶ್ವೇತಾ ಜಗದೀಶ್ ಕೂಡಾ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಹಿನ್ನಲೆ ಇಬ್ಬರನ್ನೂ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

 

 

 

 

 

ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಸುದ್ದಿಗಾರರ ಜೊತೆ ಮಾತನಾಡಿ ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರದ ಕೊನೆಯ ಅವಧಿಯಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸಾಮಾನ್ಯ ಮಹಿಳಾ ಮೀಸಲು ಸ್ಥಾನವನ್ನು ಅವಕಾಶ ವಂಚಿತರಿಗೆ ಮಾನ್ಯತೆ ನೀಡಿ ಅಧಿಕಾರ ಹಂಚಲಾಗಿದೆ. ಪಟ್ಟಣದ ಬಹುತೇಕ ಶೇಕಡಾ 95 ರಷ್ಟು ಅಭಿವೃದ್ದಿ ಕೆಲಸ ನಡೆದಿದೆ. ಉಳಿದ ಕೆಲಸವನ್ನು ಅಧಿಕಾರ ಅವಧಿ ಪೂರ್ಣಗೊಳ್ಳುವ ಮುನ್ನ ಮಾಡುವ ಭರವಸೆ ವ್ಯಕ್ತ ಪಡಿಸಿದರು.

 

 

 

 

ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಮುಗಿದ ಹಿನ್ನಲೆ ಪಟ್ಟಣದ ಹಾದು ಹೋಗುವ ಡಾಂಬರು ರಸ್ತೆಯನ್ನು ಸಿಸಿ ರಸ್ತೆಯಾಗಿ ಅಭಿವೃದ್ದಿ ಪಡಿಸಲಾಗುವುದು. ಈ ಕಾಮಗಾರಿಗೆ 27 ಕೋಟಿ ರೂಗಳು ಮಂಜೂರು ಆಗಲಿದೆ.  ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಮುಗಿದ ತಕ್ಷಣ ಎಂಜಿ ರಸ್ತೆ ಅಗಲೀಕರಣ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

 

 

 

 

 

ನೂತನ ಪಪಂ ಅಧ್ಯಕ್ಷೆ ಆಯಿಷಾ ತಾಸೀನ್ ಮಾತನಾಡಿ ಅಭಿವೃದ್ಧಿ ಕೆಲಸಗಳನ್ನು ಶಾಸಕರ ಮಾರ್ಗದರ್ಶನದಲ್ಲಿ ನಡೆಸುತ್ತೇವೆ. ಈ ಜೊತೆಗೆ ಆರು ಬಾರಿ ಸದಸ್ಯರಾಗಿ, ಒಮ್ಮೆ ಅಧ್ಯಕ್ಷರಾದ ನನ್ನ ಪತಿ ಮಹಮದ್ ಸಾದಿಕ್ ಅವರು ಸಹ ಪಟ್ಟಣದ ಅಭಿವೃದ್ಧಿಗೆ ಸಾಥ್ ನೀಡಲಿದ್ದಾರೆ. ಸ್ವಚ್ಛತೆ, ಕುಡಿಯುವ ನೀರು ಪೂರೈಕೆ ಮಾಡಲು ಬದ್ದರಾಗಿರುತ್ತೇವೆ ಎಂದರು.

 

 

 

 

ನೂತನ ಉಪಾಧ್ಯಕ್ಷೆ ಶ್ವೇತಾ ಜಗದೀಶ್ ಮಾತನಾಡಿ ಶಾಸಕರ ಸಲಹೆಯಂತೆ ಎಲ್ಲಾ ಸದಸ್ಯರ ವಿಶ್ವಾಸದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಉಳಿದ ಅಲ್ಪ ಅವಧಿಯಲ್ಲಿ ನಿರಂತರ ಕೆಲಸಗಳು ನಡೆಸುತ್ತೇವೆ ಎಂದರು.

 

 

 

 

ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ರೆಹಮತ್ ಉಲ್ಲಾ, ಪ ಪಂ ಸದಸ್ಯರಾದ ಮಹಮ್ಮದ್ ಸಾದಿಕ್, ಶೌಕತ್ ಆಲಿ, ರೇಣುಕಾಸ್ವಾಮಿ, ಸಿ.ಮೋಹನ್, ಕುಮಾರ್, ಅಣ್ಣಪ್ಪಸ್ವಾಮಿ, ಶಶಿಕುಮಾರ್, ಶಿವಕುಮಾರ್, ಆನಂದ್, ಮಂಗಳಮ್ಮ, ಮಮತಾ, ಮುಖಂಡರಾದ ಅಬ್ದುಲ್ ಅಜೀಜ್, ಬಾಬು, ಸೈಯದ್ ಇಲಿಯಾಜ್, ಲತೀಫ್ ಖಾನ್, ಮೆಹಬೂಬ್ ಪಾಷಾ, ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರು ಇದ್ದರು.

(ವರದಿ:-ಸಂತೋಷ್ ಗುಬ್ಬಿ)

Leave a Reply

Your email address will not be published. Required fields are marked *